
ಕಣ್ಣುಗಳೆರಡು ಇನ್ನೆರಡು ಕಣ್ಣುಗಳನ್ನು ಕಣ್ಣುಸಂದಣಿಗಳಲ್ಲಿ
ಕಣ್ಣ ಮಿಟುಕಿಸದೇ ಹುಡುಕಾಡುತ್ತಿದ್ದವು,
ಕೆಲ ಕ್ಷಣಗಳ ನಂತರ ಆ ಕೋಮಲ ಕಣ್ಣುಗಳು ಕಂಡವು,
ಈ ಕಣ್ಣರೆಪ್ಪೆಗಳು ಖುಷಿಯಿಂದ ಕುಣಿದಾಡಿದವು,
ಏರಿದ ಹುಬ್ಬುಗಳು ಇಳಿದವು,
ಕಣ್ಣುಗಳು ಕಲೆತುಕೊಂಡವು,
ಮಾತನಾಡಿಕೊಂಡವು, ಜಗಳವಾಡಿದವು,
ಛೇಡಿಸಿಕೊಂಡವು,
ಕಣ್ಣು ಕಣ್ಣುಗಳ ಮಿಲನಗಳಿಗೆ ಸಮಯದ ಕಣ್ಣು, ಹದ್ದಿನ ಕಣ್ಣುಗಳ
ಕಾಟವಾಗತೊಡಗಿತು,
ಬೆರೆತಿದ್ದ ಕಣ್ಣುಗಳು ಬೇರೆಯಾದವು
ಬೇರೆಯಾದ ಕಣ್ಣುಗಳು ಅತ್ತವು,
ಕೆಂಪಾದವು,
ಕಣ್ಣುಗಳಿಗೇನು..? ನಿಂತು ನಿಂತು ಸುಸ್ತಾದ
ರೆಪ್ಪೆಗಳು ಮುಚ್ಚಿಕೊಂಡವು, ಕಚ್ಚಿಕೊಂಡವು
ನಿದ್ದೆಗೆ ಜಾರುತ್ತಿದ್ದ ಕಣ್ಣುಗಳು ಮುಚ್ಚಿದ
ರೆಪ್ಪಗಳಲ್ಲಿ ಆ ಕಣ್ಣುಗಳ ಸನಿಹವನ್ನು ಬಯಸುತ್ತಿತ್ತು
ಆ ಕಣ್ಣುಗಳ ನೆನಪು ಚಿತ್ರಪಟವಾಗಿ
ರೆಪ್ಪೆಗಳನ್ನೇ ಪರದೆಯಾಗಿಸಿಕೊಂಡು
ಮೂಡಿದವು..,
ಕಣ್ಣುಗಳನ್ನು ಆವರಿಸಿಕೊಂಡವು
ತುಂಬಿಕೊಂಡವು.............
No comments:
Post a Comment