ಎಂದಿನಂತೆ ರಾತ್ರಿ ಊಟ ಮುಗಿಸಿದೆ, ಹಿಂದಿನ ದಿನ ರಾತ್ರಿ ಎರಡು ಗಂಟೆಯವರೆಗೆ ಸಿನೆಮಾ ನೋಡಿದ ಕಾರಣವೇನೋ ಗಂಟೆ ಒಂಬತ್ತು ಕೂಡ ಆಗಿರಲಿಲ್ಲ ಕಣ್ಣು ಎಳೆಯುತ್ತಿತ್ತು, ಹೊರಗಡೆ ಚಳಿ ಬೇರೆ, ರೂಮಿನ ಕಿಟಕಿ ಬಾಗಿಲುಗಳನ್ನು ಬಂದ್ ಮಾಡಿ ಫ್ಯಾನ್ ಸ್ವಿಚ್ ಹಾಕಿ ರೆಗ್ಯುಲೇಟರನ್ನು ಫುಲ್ಲು ತಿರುಗಿಸಿದೆ ಚಳಿ ಎಷ್ಟೇ ಇರಲಿ ನಂಗೆ ಫ್ಯಾನ್ ಮಾತ್ರ ಫುಲ್ಲ್ ಸ್ಪೀಡಲ್ಲಿ ಬೇಕು, ಕೊರೆಯುವ ಚಳಿಯಲ್ಲಿ ದಪ್ಪ ಹೊದಿಕೆಯ ಒಳಗೆ ಬೆಚ್ಚನೆ ಮುದುರಿ ಮಲಗುವುದೆಂದರೆ ಆಹಾ.. ವರ್ಣಿಸಲು ಪದಗಳು ಸಾಲದು. ಹಾಸಿಗೆ ಬಿಡಿಸಿ ಹೊದಿಕೆಯೊಳಗೆ ತೂರಿಕೊಂಡೆ, ಚಳಿಯೊಂದಿಗೆ ಬಿಸಿಯನ್ನು ಆನಂದಿಸತೊಡಗಿದೆ, ನಿದ್ರಾದೇವಿಯ ಆವಾಹನೆಯಾಗುತ್ತಿತ್ತು,..
ಆನಂದಿಂದ ಆಲಿಸುತ್ತಿದ್ದೆ, ಕುನ್ನಕ್ಕುಡಿ ವೈದ್ಯನಾಥನ್ ರವರ ವಯೋಲಿನ್ ವಾದನ ಆಹಾ ಅದೇನು ರಾಗ, ಅದೇನು ಸ್ವರ., ಅಭೇರಿ ರಾಗದಲ್ಲಿ ನಗುಮೋಮು ನುಡಿಸುತ್ತಿದ್ದರು., ನನ್ನ ಇಷ್ಟದ ರಾಗ ವಾವ್, ನನ್ನ ಕೈ ಕಾಲುಗಳು ತಾಳಕ್ಕೆ ಜತೆಗೂಡುತ್ತಿದ್ದವು, ಕಣ್ಣು ಮುಚ್ಚಿ ಆನಂದಿಸುತ್ತಿದ್ದೆ, ಸ್ವಲ್ಪ ಹೊತ್ತಿನ ಮೇಲೆ ಬಹಳ ಇಂಪಿನಿಂದ ಕೂಡಿದ ವಯಲಿನ್ ನ ಸ್ವರ ತಾರಕಕ್ಕೇರಿತು, ಹೈ ಪ್ರೀಕ್ವೆನ್ಸಿಯ ಸ್ವರ ಅತ್ಯಂತ ಸಪೂರವಾಗಿ ಕಿವಿಗೆ ಕುಕ್ಕುತಿತ್ತು.. ತಡೆಯಾರದೆ ಕಣ್ಣು ತೆರೆದೆ., ಸುತ್ತಲೂ ಕರಾಳ ಕತ್ತಲೆ, ಕುನ್ನಕ್ಕುಡಿಯವರೆಲ್ಲಿ.? ನನ್ನ ಸುತ್ತಲೂ ಕುಳಿತಿದ್ದ ಅಗಾಧ ಜನಸಂಖ್ಯೆಯೆಲ್ಲಿ.? ಸುತ್ತಲೂ ನೋಡಿದೆ, ಬದಿಯಲ್ಲಿ ಮೊಬೈಲ್ ಕೂಗಿತು ಟಿಂ ಟಿಂ ಮೆಸೇಜ್ ಬಂದಿತ್ತು, ತೆಗೆದಾಗ ಮೊಬೈಲ್ನ ಬೆಳಕಲ್ಲಿ ಸುತ್ತಲೂ ನೋಡಿದೆ, ಹೌದು ಹಾಸಿಗೆ ಮೇಲಿದ್ದೇನೆ ಆದರೆ ಆ ಕಿವಿ ಕುಕ್ಕುವ ಸ್ವರ ಮತ್ತೆ ಕಿವಿಯ ಬಳಿಯಿಂದಲೇ ಕೇಳಿಸಿತು ಸಂಶಯವೇ ಇಲ್ಲ ಸೊಳ್ಳೆ..! ಸಿಟ್ಟು ಬಂದು ಬೀಸಿ ಹೊಡೆದೆ ಅಮ್ಮಾ.. ನನ್ನ ಕೆನ್ನೆಗೆ ನಾನೇ ಬಡಿದುಕೊಂಡೆ, ಸೊಳ್ಳೆ ಎಸ್ಕೇಪ್ ಆಗಿತ್ತು, ನಿದ್ದೆ ಎಲ್ಲಾ ಬಿಟ್ಟಿತ್ತು.
ಈ ಫ್ಹ್ಯಾನ್ ನ ಗಾಳಿಗೆ ಸೊಳ್ಳೆ ಹೇಗೆ ಬಂತು..? ಮೇಲೆ ನೋಡಿದರೆ ಫ್ಯಾನ್ ತಿರುಗುತ್ತಿಲ್ಲ ಥತ್ತೇರಿ ಕರೆಂಟ್ ಹೋಗಿದೆ, ಅಂದರೆ ಇಷ್ಟೊತ್ತು ಕೇಳಿಸಿದ ಕನಸಿನ ವಯಲಿನ್ ಈ ಸೊಳ್ಳೆಯೇ.. ಛೆ ಛೆ. ಎಂಬ ಬೇಜಾರಾಯಿತು
ದಪ್ಪ ಹೊದಿಕೆಯಾದಕಾರಣ ಮೈಯೆಲ್ಲಾ ಬೆವರಿತ್ತು., ಹೊದಿಕೆಯನ್ನು ಎಸೆದು ಹೋಗಿ ಕಿಟಕಿಯನ್ನು ತೆರೆದೆ, ಹೊರಗಿನಿಂದ ತಂಪಾದ ಗಾಳಿ ಬೀಸುತ್ತಿತ್ತು ಮನಸ್ಸಿಗೆ ಹಿತವೆನಿಸಿ ಪುನಹ ಹಾಸಿಗೆಯಲ್ಲಿ ಬಿದ್ದುಕೊಂಡೆ, ಸ್ವಲ್ಪ ಹೊತ್ತು ಮೈಯೆಲ್ಲ ಬೆವರಿದ್ದರಿಂದ ಕೂಡಲೇ ನಿದ್ದೆ ಬರಲಿಲ್ಲ, ಇನ್ನೇನು ನಿದ್ದೆ ಬಂತು ಅನ್ನುವಷ್ಟರಲ್ಲಿ ಎರಡೂ ಕಿವಿಗಳ ಬಳಿಯಲ್ಲಿ ಎರಡೆರಡು ವಯಲಿನ್ ಗಳು., ಕೈಗಳನ್ನು ಬೀಸಿದೆ ಸ್ವಲ್ಪ ದೂರ ಹೋದ ಸೊಳ್ಲೆಗಳು ಮತ್ತೆ ಹಾಜರ್, ಹೊದಿಕೆ ಹೊದ್ದು ಮಲಗಿದರೆ ವಿಪರೀತ ಸೆಖೆ, ಹೊದೆಕೆ ತೆಗೆದು ಮಲಗಿದರೆ ಕಚ್ಚುವ ವಯೋಲಿನ್ ಗಳ ಕಾಟ "ಯಪ್ಪಾ ಭಗವಂತಾ..." ಈಗ ಸಿನೆಮಾದ ಸುದೀಪ್ ನ ನೆನಪಾಯಿತು., ಸೊಳ್ಳೆಯನ್ನು ಗುರಿಯಿಟ್ಟು ಹೊಡೆಯುವ ಅಂದರೆ ಕತ್ತಲೆ., ಅಸಹಾಯಕನಾಗಿದ್ದೆ. ಸೊಳ್ಳೆಗಳ ಮೇಲೆ ಸಿಟ್ಟು ಉಕ್ಕುತ್ತಿತ್ತು, ಸೊಳ್ಳೆಗಳನ್ನು ಕೊಲ್ಲಲೇಬೇಕು ಕರೆಂಟ್ ಬರಲಿ ಮಾಡುತ್ತೇನೆ ಅಂದಕೊಂಡು ಫ್ಹ್ಯಾನ್ ಸ್ವಿಚ್ ಆಫ್ ಮಾಡಿ ಮತ್ತೆ ಬೆವರಿದರೂ ತೊಂದರೆಯಿಲ್ಲ ಅಂದುಕೊಂಡು ಕಿಟಕಿ ಬಾಗಿಲುಗಳನ್ನು ಬಂದು ಮಾಡಿದೆ ಸೊಳ್ಳೆಗಳು ತಪ್ಪಿಸಿಕೊಳ್ಳದಂತೆ, ದೇವರ ದಯೆ ನನ್ನ ಮೇಲಿತ್ತು ಕರೆಂಟ್ ಬಂತು.,ಸಡನ್ ಎದ್ದು ಲೈಟ್ ಆನ್ ಮಾಡಿದೆ., ಹಾರುತ್ತಿದ್ದ
ಸಂಗೀತ ವೋಕಲ್ ಗಳು ನನ್ನನ್ನ ನೋಡಿ ಕುಚೋದ್ಯ ಮಾಡಿದಂತಾಯಿದು., ನನ್ನ ಹಳೇ ಲಾಂಗ ಬುಕ್ ಅನ್ನು ತೆಗೆದು ಪಟ ಪಟ ಬೀಸಿದೆ ಎರಡು ಸೊಳ್ಳೆ ಸತ್ತು ಬಿತ್ತು, ಇನ್ನೆರಡು ಪಲಾಯನ ಮಾಡುವ ಹಾಗೆ ಅನಿಸಿತು. ರೂಮೆಲ್ಲಾ ಅಟ್ಟಿಸಿಕೊಂಡು ಬಡಿದೆ, ಹಲವು ಪೆಟ್ಟು ವೇಸ್ಟ್ ಆಯ್ತು, ಅಪ್ಪ ಅಮ್ಮ ರೂಮಿಂದ ಓಡಿಕೊಂಡು ಬಂದರು, "ಏನಾಯ್ತು ಮಾರಯಾ ಕಳ್ಲ ಗಿಳ್ಲ ಬಂದಿದಾನಾ.??" " ಏನಿಲ್ಲಾ ನಂಗೆ ಸ್ವಲ್ಪ ಲೆಕ್ಕ ಚುಕ್ತಾ ಮಾಡಲಿಕ್ಕುಂಟು ನೀವು ಹೋಗಿ ಮಲಗಿ."
" ಅಲ್ಲ ಮಾರಾಯ ನಿನ್ನ ಲೆಕ್ಕ ಚುಕ್ತದಿಂದ ನಮ್ಗೆ ನಿದ್ದೆ ಬರುದಿಲ್ಲಾ ನಾಳೆ ಬೆಳಿಗ್ಗೆ ಮಾಡು"
ನೀವು ಹೋಗಿ ಮಲಗಿ" ಅಂದೆ ಏರು ಸ್ವರದಿಂದ ಇನ್ನೆರಡು ಪೆಟ್ಟು ಹಾಕುತ್ತಾ.
ಅಬ್ಬ ಇನ್ನೊಂದು ಸೊಳ್ಳೆ ಬಿತ್ತು, ಉತ್ಸಾಹದಿಂದ ಮತ್ತೂ ಜೋರು ಬೀಸಿದೆ., ಕೊನೆಯದು ಸ್ವಲ್ಪ ಆಟ ಆಡಿಸಿ ಪುಸ್ತಕದೆಡೆಗೆ ಸಿಕ್ಕು ಸತ್ತು ಹೋಯಿತು..
ಸೇಡು ತೀರಿಸಿದ ಖುಷಿ ಮನಸ್ಸಿನಲ್ಲಿ ಕುಣಿಯುತ್ತಿತ್ತು, ಮೈಯಲ್ಲಿ ಬೆವರು ಹನಿಯುತ್ತಿತ್ತು ಹೋಗಿ ಫ್ಯಾನ್ ಆನ್ ಮಾಡಿದೆ ಜೋರಾಗಿ ಬೀಸುತ್ತಿದ್ದ ಗಾಳಿ ಮೈಗೆ ಹಾಯ್ ಎನಿಸಿತು., ಸತ್ತ ಸೊಳ್ಳೆಗಳೆಡೆಗೆ ನೋಡಿದೆ
ಒಂದು ಸೊಳ್ಳೆಗೆ ಸ್ವಲ್ಪ ಜೀವವಿತ್ತು ಅದರ ಕಾಲುಗಳು ಸ್ವಲ್ಪ ಅಲ್ಲಾಡುತ್ತಿತ್ತು, ದಿಟ್ಟಿಸಿ ನೋಡಿದೆ., ಹೌದು ಸ್ವಲ್ಪ ಜೀವವಿತ್ತು., ಅದರ ಕಥೆ ಮುಗಿಸಬೇಕು ಅನ್ನುವಷ್ಟರಲ್ಲಿ., " ನಾನು ಕೇವಲ ನನ್ನ ಹೊಟ್ಟೆ ತುಂಬಿಸಿಕೊಳ್ಳಲು ಬಂದೆ ನಾನು ರಕ್ತ ಕುಡಿದಿದ್ದರೆ ನಿನಗೇನೂ ನಷ್ಟವಾಗುತ್ತಿರಲಿಲ್ಲ , ಅಂದ ಹಾಗೆ ನನ್ನ ಆಹಾರವೇ ನಿನ್ನ ರಕ್ತ, ನಾನು ಕಚ್ಚಿದಲ್ಲಿ ಸ್ವಲ್ಪ ತುರಿಕೆಯಾಗುತ್ತಿತ್ತೇ ವಿನಹ ಬೇರೆ ಏನೂ ಆಗುತ್ತಿರಲಿಲ್ಲ ಆದರೆ ನೀನು ನನ್ನ ಜೀವವನ್ನೇ ತೆಗೆದೆ ಅಲ್ಲವೇ., ? ನನ್ನ ದೇಹ ಚಿಕ್ಕದಿರಬಹುದು ಆದರೆ ನನ್ನ ಜೀವಕ್ಕೆ ಬೆಲೆ ಇಲ್ಲವೇ..??" ಅಂದಂಗಾಯಿತು.., ಯಾಕೋ ಉತ್ಸಾಹವೆಲ್ಲಾ ಇಳಿಯಿತು., ಪುನಹ ನೋಡಿದೆ, ಅದು ಸತ್ತಿತ್ತು ಯಾಕೋ ಉತ್ಸಾಹವೆಲ್ಲಾ ಸೋರಿ ಹೋಗಿತ್ತು, ಕೊಲೆ ಮಾಡಿದ ಪಾಪ ಪ್ರಜ್ನೆ ಮನಸ್ಸೆನ್ನೆಲ್ಲಾ ಕಾಡುತ್ತಿತ್ತು... ಹಾಗೇ...................zzzzzzzzzzzzzzzzz

