Popular Posts

Wednesday, 28 August 2013

ಕನಸೊಂದ ಕಂಡೆ



ಕನಸೊಂದ ಕಂಡಿದ್ದೆ ನಿನ್ನೆ ಇರುಳೊಳಗೆ
ಜಗವು ಹಗುರಾಗಿತ್ತು ಬೆರಳೆಣಿಕೆಯೊಳಗೆ
ಗಡಿಯಿಲ್ಲ ಗಡುವಿಲ್ಲ ಧರಣಿಯಾ ಮಡಿಲಲ್ಲಿ
ಪ್ರೀತಿಯದು ನಲಿದಿತ್ತು ಪ್ರತಿಯೊಡಲಿನೊಳಗೆ

ಮತ್ತೇರಲೋಸುಗ ಮದ್ಯವಿರಲಿಲ್ಲ
ಗತ್ತೇರಲೋಸುಗ ಮಹಲುಗಳದಿಲ್ಲ
ಸತ್ಯ ಸುತ್ತುತ್ತಿತ್ತು ಪುರುಸೊತ್ತೇ ಇಲ್ಲ
ಹೊತ್ತು ಕಳೆದಾಗಲೂ ಭಯವಿರಲಿಲ್ಲ

ಜಾತಿಯಿರಲಿಲ್ಲ ಮತವೂ ಇರಲಿಲ್ಲ
ಗಾದಿಗೆ ಗುದ್ದಾಡುವ ಪಕ್ಷಗಳಿಲ್ಲ
ದೇವನಿರಲಿಲ್ಲ ದೇಗುಲಗಳಿಲ್ಲ
ಭಾವನೆಗಳ ಹೂಮನೆಗೆ ಬಾಗಿಲಿರಲಿಲ್ಲ

ಕುರೂಪದ ಅಣಕಕೆ ಚಂದವಿರಲಿಲ್ಲ
ಸೌಂದರ್ಯದ ದ್ವೇಷಕೆ ವಕ್ರವಿರಲಿಲ್ಲ
ಖುಷಿಯೆಂಬ ಆಸ್ತಿಗೆ ಮೇರೆ ಇರಲಿಲ್ಲ
ಹಸಿವೆಂಬ ಭಾದೆ ಯಾರಿಗೂ ಇರಲಿಲ್ಲ

ಮೆತ್ತನೆ ಹಾಸಿಗೆಯಲ್ಲಿ ತಿಗಣೆಇರಲಿಲ್ಲ
ಹೊದಿಕೆ ದಿಂಬುಗಳು ಬೇಕಾಗಿರಲಿಲ್ಲ
ಉದಯಿಸುವ ರವಿಯು ಕೆಲಸಬಿಡಲಿಲ್ಲ
ನನ್ನ ಈ ಕನಸು ಮಂದೆ ಹೋಗಲಿಲ್ಲ