Popular Posts

Friday, 8 February 2013

ಉಸಿರು

ಅವಳನ್ನು ಕಂಡಾಗ ಮನವಾಯ್ತು ಹೂದೋಟ
ಇರುಳಲ್ಲಿ ಕನಸಲ್ಲಿ ಜೇನು ದುಂಬಿಗಳ ಕಾಟ
 ಬೆರಳೆಣಿಕೆ ತಾರೆಗಳ ಕೊರಳಲ್ಲಿ ಸುತ್ತಿಹಳು
ಬರಿದಾದ ನನ ಬಾಳ ಬೆಳಕಾಗಿ ಬಂದಿಹಳು

ಮೊಗವರಳು ಮಲ್ಲಿಗೆಯು, ಜಗವರಿತು ಬಲ್ಲವಳು
ಸೊಗಸಾದ ಕನಸಲ್ಲಿ ಹೂಬಳ್ಳಿ ನೆಟ್ಟವಳು
ನೊಗವಾಗಿ ಒಲವಲ್ಲಿ ಬಗಲಲ್ಲಿ ಕುಳಿತವಳು
ಹೆಗಲಲ್ಲಿ ಬಲವಾಗಿ ಲತೆಯಂತೆ ಹಬ್ಬಿಹಳು

ಕಣ್ಣೊಳಗಿನಾ ಒಲವು ಹೇಳಲಾಗದ ಭಾವ
ಸಣ್ಣ ಹೃದಯದ ಒಳಗೆ ಅಚ್ಚೊತ್ತಿದಾ ಜೀವ
ನನ್ನೊಡನೆ ಅವಳು ಹಸಿವಸಂತದಾ ಹಸಿರು
ಇನ್ನೇನು ಬೇಕೆನಗೆ ದೊರಕಿತೆನ್ನಯ ಉಸಿರು

No comments:

Post a Comment